ಗಾಲ್ಡೋನಿ, ಕಾರ್ಲೋ

ಗಾಲ್ಡೋನಿ, ಕಾರ್ಲೋ

ಬದಲಾಯಿಸಿ

1707-93. ಇಟಲಿಯ ಸಾಂಪ್ರದಾಯಿಕ ನಾಟಕವನ್ನು ಸುಧಾರಿಸಿದ ನಾಟಕಕಾರ. ಇಟಾಲಿಯನ್ ಹರ್ಷನಾಟಕದ ಜನಕನೆಂದು ಪ್ರಸಿದ್ಧನಾಗಿದ್ದಾನೆ. ಇಟಾಲಿಯನ್ ನಾಟಕದ ಚರಿತ್ರೆಯಲ್ಲಿ ಗಾಲ್ಡೋನಿಗೆ ವಿಶಿಷ್ಟಸ್ಥಾನ ಸಂದಿದೆ. ಈತ ಬಳಕೆಗೆ ತಂದ ಅನೇಕ ಸುಧಾರಣೆಗಳಿಂದ ರಂಗಭೂಮಿಯ ವಿನ್ಯಾಸವೇ ಬದಲಾಯಿತು. ಅನೇಕ ಮಿಮರ್ಶಕರು ಇಟಲಿಯ ಮಾಲ್ಯೆರ್ ಎಂದು ಹೊಗಳಿದ್ದಾರೆ.

ಈತ ಹುಟ್ಟಿದ್ದು 1707ರ ಫೆಬ್ರವರಿ 25ರಂದು ವೆನಿಸ್ಸಿನಲ್ಲಿ. ಸ್ವಲ್ಪಕಾಲ ವಕೀಲಿ ವೃತ್ತಿಯಲ್ಲಿದ್ದು ಅನಂತರ ನಾಟಕರಂಗಕ್ಕೆ ಇಳಿದ.

ನಾಟಕಗಳನ್ನು ಬರೆಯುವ ಆಸೆ ಗಾಲ್ಡೋನಿಗೆ ಬಾಲ್ಯದಿಂದಲೂ ಇತ್ತು. ಎಂಟನೆಯ ವಯಸ್ಸಿನಲ್ಲೆ ಈತ ತನ್ನ ಮೊದಲನೆಯ ನಾಟಕ ಬರೆದನೆನ್ನಲಾಗಿದೆ. 1734ರಲ್ಲಿ ಈತ ಬರೆದ ಬೆಲಿಸಾರಿಯೊ ಎಂಬ ದುರಂತನಾಟಕವನ್ನು ಜನತೆ ಮೆಚ್ಚಿದರೂ ದುರಂತನಾಟಕ ತನ್ನ ಕ್ಷೇತ್ರವಲ್ಲವೆಂದು ಈತ ಬಹುಬೇಗ ಆರಿತುಕೊಂಡ. ಅನಂತರ ಚತುರೋಕ್ತಿಯ ಹರ್ಷನಾಟಕಗಳನ್ನು ಬರೆಯತೊಡಗಿದ; ಆಡು ಮಾತಿನಲ್ಲಿ ಇಟಲಿಯ ಸಾಮಾನ್ಯ ಜನಜೀವನವನ್ನು ಚಿತ್ರಿಸುವ ನಾಟಕಗಳನ್ನು ಬರೆದು ಅವನ್ನು ನೆಲೆಗೊಳಿಸಲು ಶ್ರಮಿಸಿದ.

ತನ್ನ ಕೊನೆಗಾಲದಲ್ಲಿ ವರ್ಸೇಲ್್ಸಗೆ ತೆರಳಿದ. 16ನೆಯ ಲೂಯಿಯಿಂದಾಗಿ ಈತನಿಗೆ ಬರುತ್ತಿದ್ದ ವಿಶ್ರಾಂತಿವೇತನ ಫ್ರಾನ್ಸಿನ ಮಹಾಕ್ರಾಂತಿಯ ಅನಂತರ ನಿಂತುಹೋಯಿತು. ಗಾಲ್ಡೋನಿ ತುಂಬ ಬಡತನದಲ್ಲಿ ನರಳಿ 1793ರ ಫೆಬ್ರವರಿ 6ರಂದು ಅಸುನೀಗಿದ.

1783-87ರ ನಡುವೆ ತನ್ನ ಆತ್ಮಕಥೆಯನ್ನು ಪ್ರೆಂಚ್ ಭಾಷೆಯಲ್ಲಿ ಸಿದ್ಧಪಡಿಸಿದ.

ನಾಟಕಗಳು

ಬದಲಾಯಿಸಿ

ನಾಟಕಕಾರನೂ ವಿಮರ್ಶಕನೂ ಆದ ಗಾಟ್ಸಿಯಂತೆ ಗಾಲ್ಡೋನಿ ತನ್ನ ನಾಟಕವೃತ್ತಿಯನ್ನು ಕಮೆದಿಯ ದೆಲ್ ಆರ್ತ್ನ ನಟರಿಗಾಗಿ ನಾಟಕಗಳನ್ನು ರಚಿಸುವುದರ ಮೂಲಕ ಪ್ರಾರಂಭಿಸಿದ. ಆದರೆ ಗಾಟ್ಸಿ ಬಳಸುತ್ತಿದ್ದ ನಕಲಿ ಮತ್ತು ಯಕ್ಷಿಣಿ ಕಥೆಯ ಚಮತ್ಕಾರಗಳನ್ನು ಈತ ಅಷ್ಟಾಗಿ ಬಳಸಲಿಲ್ಲ. ಗಾಲ್ಡೋನಿಯ ಒಲವು ಯಥಾರ್ಥ ನಿರೂಪಣ ಪದ್ಧತಿಯ ರಂಗಭೂಮಿಯ ಕಡೆಗಿತ್ತು. ಫ್ರೆಂಚ್ ನಾಟಕಕಾರ ಮಾಲ್ಯೆರ್ನನ್ನು ಅನುಸರಿಸಿ ನೈಜರೀತಿಯಲ್ಲಿ ಸಾಮಾಜಿಕ ಜೀವನದ ಸತ್ಯಗಳನ್ನು ಚಿತ್ರಿಸುವುದು ಇವನ ಆಸೆ. ಈ ದಿಕ್ಕಿನಲ್ಲಿ ಇವನ ಪ್ರಥಮ ಪ್ರಯತ್ನ, ಮೋಮೆಲೊ ದಿ ಕೋರ್ಟಿಯರ್ (1738)- ಇದರಲ್ಲಿ ವೆನಿಷಿಯನ್ ಪ್ರಾಂತ್ಯ ಭಾಷೆಯನ್ನು ಬಳಸಿದ್ದಾನೆ. ಇದೇ ಶೈಲಿಯಲ್ಲಿ ಬರೆದ ಇನ್ನೊಂದು ನಾಟಕ, ದಿ ವರ್ದಿ ವುಮನ್ (1743). ಈ ನಾಟಕಗಳಲ್ಲಿ ರಂಗದ ಮೇಲೆ ಮೊಗವಾಡಗಳನ್ನು ಧರಿಸುವ ಸಾಂಪ್ರದಾಯಿಕ ಪದ್ಧತಿಯಿಂದ ನಟರನ್ನು ಗಾಲ್ಡೋನಿ ಮುಕ್ತಗೊಳಿಸಿದ. ಒಳ್ಳೆಯ ಹರ್ಷನಾಟಕ ಜನತೆಯ ಗುಣ ದೋಷಗಳನ್ನು ಸರಿಪಡಿಸುತ್ತದೆ ಎನ್ನುವುದು ಈತನ ನಿಲುವು. ಗಾಲ್ಡೋನಿ ಶಿಷ್ಟ ಇಟಾಲಿಯನ್ ಭಾಷೆಯಲ್ಲಿ ನಾಟಕಗಳನ್ನು ರಚಿಸಿದ್ದಾನಾದರೂ ಅವು ಅಷ್ಟಾಗಿ ಪ್ರಸಿದ್ಧಿ ಪಡೆಯಲಿಲ್ಲ. ವೆನಿಷಿಯನ್ ಪ್ರಾಂತೀಯ ಭಾಷೆಯಲ್ಲಿ ಈತ ಬರೆದ ನಾಟಕಗಳಲ್ಲೇ ಸಾಮಾಜಿಕ ಜೀವನದ ಉತ್ತಮ ಪಾತ್ರಗಳು ರೂಪುಗೊಂಡಿವೆ ಎಂದು ವಿಮರ್ಶಕರ ಅಭಿಪ್ರಾಯ.

ಗಾಲ್ಡೋನಿ 260ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾನೆ. 1750-51ರ ಒಂದು ವರ್ಷದ ಅವಧಿಯಲ್ಲೇ 16 ನಾಟಕಗಳನ್ನು ಈತ ಬರೆದನೆನ್ನಲಾಗಿದೆ. ಗಾಟ್ಸಿಯ ಪ್ರತಿಸ್ಪರ್ಧೆ ಮತ್ತು ವಿರೋಧದಿಂದಾಗಿ ಗಾಲ್ಡೋನಿ 1761ರಲ್ಲಿ ವೆನಿಸ್ಸನ್ನು ಬಿಟ್ಟು ಪ್ಯಾರಿಸ್ಸಿಗೆ ಹೋದ. ಅಲ್ಲಿ ಇಟಾಲಿಯನ್ ರಂಗಭೂಮಿಯ ವ್ಯವಸ್ಥಾಪಕನ ಹುದ್ದೆಯನ್ನು ಒಪ್ಪಿಕೊಂಡ ಇವನು 1763ರಲ್ಲಿ ಬರೆದ ದಿ ಫಾನ್ ಬಹಳ ಪ್ರಸಿದ್ಧವಾಯಿತು. ತರುವಾಯ ಫ್ರಾನ್ಸಿನ ರಾಜಕುಮಾರಿಗೆ ಇಟಾಲಿಯನ್ ಭಾಷೆಯನ್ನು ಕಲಿಸಿದ. 16ನೆಯ ಲೂಯಿಯ ಮದುವೆಗೆಂದು ಫ್ರೆಂಚ್ ಭಾಷೆಯಲ್ಲಿ ದಿ ಕೈಂಡ್ಲಿ ಬೂಅರ್ (1771) ಎಂಬ ನಾಟಕವನ್ನು ಬರೆದ.

🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುಸಹಾಯ:ಲಿಪ್ಯಂತರವಿಶೇಷ:Searchಮುಖ್ಯ ಪುಟಬೆಂಗಳೂರು ಕೋಟೆದ.ರಾ.ಬೇಂದ್ರೆಗಾದೆಮಾಗಡಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಕನ್ನಡಗೌತಮ ಬುದ್ಧಶಿವರಾಮ ಕಾರಂತಬೆಂಗಳೂರುಕರ್ನಾಟಕಕನ್ನಡ ಅಕ್ಷರಮಾಲೆಮಾದಕ ವ್ಯಸನವಿಜಯನಗರ ಸಾಮ್ರಾಜ್ಯಜಿ.ಎಸ್.ಶಿವರುದ್ರಪ್ಪಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರಾಷ್ಟ್ರಪತಿಗಳ ಪಟ್ಟಿವಿನಾಯಕ ಕೃಷ್ಣ ಗೋಕಾಕಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಯು.ಆರ್.ಅನಂತಮೂರ್ತಿಒಳಮಾಳಿಗೆಚಂದ್ರಶೇಖರ ಕಂಬಾರಪೂರ್ಣಚಂದ್ರ ತೇಜಸ್ವಿಚರಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಹುತ್ರಿದುರ್ಗಚಿತ್ರ:Kempegowda I.jpgಮಹಾತ್ಮ ಗಾಂಧಿಸಂಗೊಳ್ಳಿ ರಾಯಣ್ಣಗಿರೀಶ್ ಕಾರ್ನಾಡ್ಫ.ಗು.ಹಳಕಟ್ಟಿ